ಕಪ್ಪಿ ಚಕ್ರ : ನೇಮಿಯಲ್ಲಿ (ರಿಮ್) ಕುಣಿಯಿರುವ (ಗ್ರೂವ್) ಚಕ್ರ (ಪೀವ್) ಸಾಮಾನ್ಯವಾಗಿ ಇದು ಚಕ್ರದ ಅಕ್ಷಕ್ಕೆ ಅಡ್ಡವಾಗಿರುತ್ತದೆ. ಉತ್ತಮ ಘರ್ಷಣೆಯ ಗುಣಗಳಿಗಾಗಿ ಎರಕದ ಕಬ್ಬಿಣದಿಂದಲೂ ಜಾರುವಿಕೆಯ ಅವಗುಣವಿದ್ದರೂ ಕಡಿಮೆ ವೆಚ್ಚ ಮತ್ತು ಕಡಿಮೆ ತೂಕಕ್ಕಾಗಿ ಒತ್ತಿದ ಉಕ್ಕಿನಿಂದಲೂ (ಪ್ರೆಸ್ಡ್‌ ಸ್ಟೀಲ್) ಇದನ್ನು ತಯಾರಿಸುತ್ತಾರೆ. 

ಕಪ್ಪಿ ಚಕ್ರವನ್ನು ಒಂದೇ ಭಾಗವಾಗಿ ತಯಾರಿಸಿದರೆ, ದಂಡದ (ಷಾಫ್ಟ್‌) ಕೊನೆಯಿಂದ ಮಾತ್ರ ಅದನ್ನು ತೂರಿಸಲು ಸಾಧ್ಯ. ಅದನ್ನು ಎರಡು ವಕ್ರಕಾಂಡಗಳ (ಕ್ರ್ಯಾಂಕ್ಸ್‌) ನಡುವೆ ಇರಿಸಲು ಎರಡು ಭಾಗಗಳಲ್ಲಿ ತಯಾರಿಸಿ, ಅವನ್ನು ಬೋಲ್ಟುಗಳಿಂದ ಜೋಡಿಸಬೇಕು.
ಕಪ್ಪಿ ಚಕ್ರಗಳ ನೇಮಿಯಲ್ಲಿ ಅಡ್ಡಲಾಗಿ ಗಿ-ಆಕಾರದ ಕುಣಿಯನ್ನು ಕೊರೆದು, ಹಗ್ಗ ಅಥವಾ ಗಿ -ಆಕಾರದ ಬೆಲ್ಟಿನಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಮಥರ್ಯ್‌ದ ಪ್ರಸರಣವನ್ನು (ಪವರ್ ಟ್ರಾನ್ಸ್‌ಮಿಶನ್) ಮಾಡಬಹುದು. ಒಂದು ಕಪ್ಪಿ ಚಕ್ರದಲ್ಲಿ ಸು.24ರ ವರೆಗೆ ಕುಣಿಗಳಿರಬಹುದು. ಹಗ್ಗ ಅಥವಾ ಪಟ್ಟಿಗೆ ಹೊಂದಿಕೊಂಡಂತೆ ಕುಣಿಯಿರಬೇಕಾದದು ಆವಶ್ಯಕ. ಹೀಗಿಲ್ಲದೆ ದೊಡ್ಡದಾಗಿದ್ದರೆ ಹಗ್ಗ ಅಥವಾ ಬೆಲ್ಟಿಗೆ ಸಿಗುವ ಹಿಡಿತ (ಸಪೋರ್ಟ್) ಕಡಿಮೆಯಾಗಿ ಇವು ತಮ್ಮ ಅಡ್ಡಕೊಯ್ತದ ಆಕಾರವನ್ನು ಬದಲಾಯಿಸಬಹುದು.  ಕಡಿಮೆಯಿದ್ದರೆ ಹಗ್ಗ ಅಥವಾ ಬೆಲ್ಟಿನ ಸಾಮಾನ್ಯ ಪರಿಭ್ರಮಣಕ್ಕೆ ಅಡ್ಡಿಯಾಗುತ್ತದೆ. 

ನೇಮಿಯಲ್ಲಿ ಅಕ್ಷಕ್ಕೆ ಸಮಾನಾಂತರವಾಗಿ ಕುಣಿಗಳುಳ್ಳ ಒಂದು ವಿಧವಾದ ಕಪ್ಪಿ ಚಕ್ರವನ್ನು ಉಬ್ಬುಗಳುಳ್ಳ (ತ್ರೆಡ್ಸ್‌) ಪಟ್ಟಿಯೊಂದಿಗೆ ಉಪಯೋಗಿಸುವ ವಾಡಿಕೆಯಿದೆ. ಈ ರೀತಿಯ ಕಪ್ಪಿ ಚಕ್ರಗಳನ್ನು ಹೊಲೆಯುವ ಯಂತ್ರ, ಕಾಲನಿರ್ಣಯಚಾಲನೆ (ಟೈಮಿಂಗ್ ಡ್ರೈವ್), ಸಾಮಥರ್ಯ್‌ ಪ್ರಸರಣ ಮುಂತಾದುವುಗಳಲ್ಲಿ ಉಪಯೋಗಿಸಬಹುದು.

ನೇಮಿಯಲ್ಲಿ ಮೆಟ್ಟಲು ಅಥವಾ ಕುಣಿಯಿರುವ ಹಾಗೂ  ಕೇಂದ್ರಕ್ಕೆ ದೂರವಾಗಿ ಕೊರೆದ ರಂಧ್ರವುಳ್ಳ ಚಕ್ರಕ್ಕೆ ಉತ್ಕೇಂದ್ರಕ ಕಪ್ಪಿಚಕ್ರವೆಂದು (ಎಕ್ಸೆಂಟ್ರಿಕ್ ಷೀವ್) ಹೆಸರು. ಇದನ್ನು ಆವಿ ಎಂಜಿನ್ನುಗಳ ಕವಾಟಯಂತ್ರದಲ್ಲಿ (ವಾಲ್ವ್‌ಗಿಯರ್) ಪರಿಭ್ರಮಣ ಚಲನೆಯನ್ನು (ರೋಟರಿ ಮೋಷನ್) ಪ್ರತ್ಯಾಗಾಮಿಚಲನೆಯನ್ನಾಗಿ (ರೆಸಿಪ್ರೊಕೇಟಿಂಗ್ ಮೋಷನ್) ಮಾರ್ಪಡಿಸಲು ಉಪಯೋಗಿಸುತ್ತಾರೆ.
ಮೇಲೆ ಹೇಳಿದ ವಿಧಗಳಿಗೆ ವ್ಯತಿರಿಕ್ತವಾಗಿ, ನೇಮಿಯಲ್ಲಿರುವ ಕುಣಿಗಳ ಅಗಲವನ್ನು ಇಷ್ಟಪ್ರಕಾರ ಬದಲಾಯಿಸಲು ಅವಕಾಶವಿರುವ ಕಪ್ಪಿಚಕ್ರಗಳೂ ಉಂಟು. (ಕೆ.ಆರ್.ಎಂಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ